ಹಾಸನ ಸಮಾಚಾರ
ಎತ್ತಿನಹೊಳೆ ಯೋಜನೆಯಡಿ ನೀರು ಹರಿಸುವ ಉದ್ದೇಶದಿಂದ ಕಾಮತಿಕೂಡಿಗೆ ಬಳಿ ಆಲೂರು-ಬಿಕ್ಕೋಡು ರಸ್ತೆಯನ್ನು ತುಂಡು ಮಾಡಲಾಗಿದೆ. ಕಾಮಗಾರಿ ಮುಗಿದ ನಂತರ ರಸ್ತೆಯನ್ನು ಮಣ್ಣಿನಿಂದ ಮುಚ್ಚಲಾಗಿದ್ದು, ಮಳೆಗಾಲದಲ್ಲಿ ಗುಂಡಿಗಳಾಗಿವೆ. ಬೇಸಿಗೆಯಲ್ಲಿ ದೂಳು ತುಂಬಿದ್ದು, ಜನಸಾಮಾನ್ಯರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಮಣ್ಣು ಮುಚ್ಚಿ 2-3 ವರ್ಷ ಕಳೆದರೂ, ಡಾಂಬರು ಹಾಕದೇ ಅಲ್ಲಲ್ಲಿ ಗುಂಡಿಗಳಾಗಿವೆ. ಹಲವಾರು ವಾಹನಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ. ರಸ್ತೆ ಎರಡೂ ಬದಿಯಲ್ಲಿ ತಡೆಗೋಡೆಗಳನ್ನು ಹಾಕದೇ ಪ್ರಯಾಣಿಕರ ಪ್ರಾಣದೊಡನೆ ಇಲಾಖೆ ಚೆಲ್ಲಾಟ ಆಡುತ್ತಿದೆ. ರಾತ್ರಿ ವೇಳೆಯಲ್ಲಿ ಎದುರಿನಿಂದ ವಾಹನಗಳು ಬಂದಾಗ, ದಾರಿ ಬಿಡಲು ರಸ್ತೆ ಬದಿಗೆ ತೆರಳಿದಾಗ, ಅಪಘಾತಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಅಪಘಾತ ಸಂಭವಿಸಿದರೆ ಕನಿಷ್ಠ 100 ಅಡಿ ಆಳದ ನಾಲೆಗೆ ವಾಹನಗಳು ಬಿದ್ದು ಪ್ರಾಣಹಾನಿಯಾಗುವ ಸಂಭವವಿದೆ ಎನ್ನುತ್ತಾರೆ ಸ್ಥಳೀಯರು.
ಇತ್ತೀಚೆಗೆ ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ನಿತ್ಯ ಕಾಡಾನೆಗಳು ಅತ್ತಿಂದಿತ್ತ ತಿರುಗಾಡುತ್ತಿವೆ. ಈಗ ವಾರದಲ್ಲಿ ನಾಲ್ವರ ಮೇಲೆ ಕಾಡಾನೆ ದಾಳಿ ಮಾಡಿ ಗಾಯಗೊಳಿಸಿದೆ. ಕಾಡಾನೆ ಎದುರಾದ ಸಂದರ್ಭಗಳಲ್ಲಿ ಗುಂಡಿ ರಸ್ತೆಯಲ್ಲಿ ವಾಹನಗಳನ್ನು ಓಡಿಸಲಾಗದೇ ಆತಂಕಕ್ಕೆ ಒಳಗಾಗುತ್ತಿದ್ದಾರೆ.
ಬೇಸಿಗೆ ಇರುವುದರಿಂದ ಈ ರಸ್ತೆಗೆ ಕೂಡಲೇ ಡಾಂಬರ್ ಹಾಕಿದರೆ, ಕಾಮಗಾರಿ ಶಾಶ್ವತವಾಗಿ ಉಳಿಯುತ್ತದೆ. ಎತ್ತಿನಹೊಳೆ ಯೋಜನೆ ಅಧಿಕಾರಿಗಳು ಕೂಡಲೆ ಸ್ಥಳ ಪರಿಶೀಲಿಸಿ ರಸ್ತೆಗೆ ಡಾಂಬರು ಹಾಕಬೇಕೆಂದು ಜನಸಾಮಾನ್ಯರು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ರಸ್ತೆತಡೆ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.