ಹೆಚ್ಚಿದ ಕಾಡಾನೆ ಸಮಸ್ಯೆ : ಶಾಶ್ವತ ಪರಿಹಾರಕ್ಕೆ ದಲಿತ ಮುಖಂಡ ಧರ್ಮಯ್ಯ ಒತ್ತಾಯ..!

0
60

ಹಾಸನ ಸಮಾಚಾರ ವರದಿ, ಬೇಲೂರು.

ಕಾಡಾನೆ ದಾಳಿಯಿಂದ ಅಮಾಯಕರ ಪ್ರಾಣ ಹಾನಿ ಹೆಚ್ಚಾಗುತ್ತಿದೆ. ರೈತರ ಬೆಳೆ ನಾಶವಾಗುತ್ತಿದೆ. ರೈತರು ಮತ್ತು ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಹಾಗೂ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಕಾಡಾನೆ ಹಾವಳಿ ನಿಯಂತ್ರಿಸಲು ಶಾಶ್ವತ ಯೋಜನೆ ರೂಪಿಸಬೇಕು. ಅದಕ್ಕಾಗಿ ಸರ್ಕಾರ ತಜ್ಞರನ್ನೊಳಗೊಂಡ ಸದನ ಸಮಿತಿ ರಚಿಸಬೇಕು ಎಂದು ದಲಿತ ಮುಖಂಡ ಧರ್ಮಯ್ಯ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರು ತಾಲ್ಲೂಕಿನ ಬಿಕ್ಕೋಡು, ಅರೇಹಳ್ಳಿ ಭಾಗದ ಜನವಸತಿ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಬೆಳ್ಳಾವರ ಗ್ರಾಮದಲ್ಲಿ ವೃದ್ದೆಯೊಬ್ಬರು ಕಾಡಾನೆ ತುಳಿತದಿಂದ ಮೃತ ಪಟ್ಟಿದ್ದಾರೆ. ಈ ಹಿಂದೆ ಕೂಡ ಬಿಕ್ಕೋಡಿನ ಕಬ್ಬಿನಮನೆ ಗ್ರಾಮದಲ್ಲಿ ಇದೆ ವಸಂತ ಎಂಬುವವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ತಾಲ್ಲೂಕಿನಾಧ್ಯಾಂತ ನಿತ್ಯವೂ ಬೆಳೆ ಹಾನಿಯಾಗುತ್ತಿದೆ. ಪ್ರತಿನಿತ್ಯ ಕಾಡಾನೆಗಳು ಜನವಸತಿ ಪ್ರದೇಶದಲ್ಲಿ ಸಂಚರಿಸುತ್ತಿರುವುದರಿಂದ ರೈತರು ಭತ್ತದ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಕಾಫಿ, ಅಡಕೆ, ಬಾಳೆ ತೋಟದ ಕೆಲಸಕ್ಕೆ ರೈತರು ಮತ್ತು ಕೂಲಿಕಾರ್ಮಿಕರು ಹೋಗುತ್ತಿಲ್ಲ. ಗ್ರಾಮದಲ್ಲಿ ಕಾಡಾನೆ ಇರುವ ಮಾಹಿತಿ ಪಡೆದು ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಪಕ್ಕದ ಜಿಲ್ಲೆಗೆ ಓಡಿಸಿದರೆ ಅಲ್ಲಿನ ಅಧಿಕಾರಿಗಳ ತಂಡ ಮತ್ತೊಂದು ಜಿಲ್ಲೆಗೆ ಓಡಿಸುತ್ತಾರೆ. ಜನವಸತಿ ಪ್ರದೇಶಕ್ಕೆ ಕಾಡಾನೆಗಳು ತೆರಳದಂತೆ ಅರಣ್ಯದ ಸುತ್ತ ರೈಲ್ವೆ ಬ್ಯಾರಿಕೇಡ್ ನಿರ್ಮಿಸದಾಗ ಮಾತ್ರ ಇದಕ್ಕೆ ಶಾಸ್ವತ ಪರಿಹಾರ ಸಿಗುತ್ತದೆ ಎಂದು ಹೇಳಿದರು.