ಹಾಸನ ಸಮಾಚಾರ ವರದಿ
ವಿಧಾನಸಭೆಯಿಂದ 18 ಶಾಸಕರ ಅಮಾನತು ಹಾಗೂ ಪ.ಜಾತಿ, ಪ.ಪಂಗಡಗಳ ಅನುದಾನ ದುರ್ಬಳಕೆ ಖಂಡಿಸಿ ಹಾಸನ ನಗರದಲ್ಲಿ ಇಂದು ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಾಸಕರು ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಮಾತನಾಡಿ, ವಿಧಾನ ಸಭೆಯಲ್ಲಿ ಸಣ್ಣ ಕಾರಣಕ್ಕೆ 18 ಜನ ಶಾಸಕರನ್ನು ರಾಜಕೀಯ ದುರುದ್ದೇಶದಿಂದ 6 ತಿಂಗಳ ಕಾಲ ಅವರನ್ನು ಅಮಾನತು ಮಾಡಿ ಸ್ಪೀಕರ್ ಆದೇಶ ಹೊರಡಿಸಿರುವುದು ಖಂಡನೀಯ, ಇದೊಂದು ರಾಜಕೀಯ ಪಿತೂರಿಯಾಗಿದೆ ಕೂಡಲೇ ಅಮಾನತು ಆದೇಶವನ್ನು ಹಿಂಪಡೆದು ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸ್ಪೀಕರ್ ಮುಂದಾಗಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ, ಧರ್ಮದ ಮೇಲೆ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರಕಾರ ಸಂವಿಧಾನದ ನೀತಿ ವಿರೋಧಿಸಿ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇ.4 ರಷ್ಟು ಮೀಸಲಾತಿ ನೀಡಲು ಮುಂದಾಗಿದೆ ಅಲ್ಲದೆ, ಪ.ಜಾತಿ, ಪ.ಪಂಗಡಕ್ಕೆ ಮೀಸಲಿಟ್ಟಿದ್ದ 29 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿ ದಲಿತರಿಗೆ ಸೇರಬೇಕಿದ್ದ ಪಾಲನ್ನು ಇತರ ಕಾರ್ಯಕ್ರಮಗಳಿಗೆ ಬಳಸಿಕೊಂಡಿದೆ, ಜೊತೆಗೆ ರಾಜ್ಯದಲ್ಲಿ ಯಾವುದೇ ಹೊಸ ಕಾರ್ಯಕ್ರಮಗಳು ಹಾಗೂ ಹೊಸ ಯೋಜನಗಳು ಜಾರಿಗೆ ಬರುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಅಧಿವೇಶನದಲ್ಲಿ ಸಚಿವ ಕೆ. ಎನ್ ರಾಜಣ್ಣ ತಮ್ಮದೇ ಸರ್ಕಾರದ ವಿರುದ್ಧ ಹನಿಟ್ರಾಪ್ ಆರೋಪ ಮಾಡಿದ್ದು ಸರ್ಕಾರ ಯಾರು ಎಂಬುದನ್ನು ಪತ್ತೆ ಹಚ್ಚಿ ಅವರನ್ನು ವಜಾ ಮಾಡುವ ಕೆಲಸ ಮಾಡಬೇಕಿದೆ. ಕೇವಲ ಭ್ರಷ್ಟಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ಕಿರುಕುಳದಿಂದ ಹಲವು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಕಂಡು ಬರುತ್ತಿವೆ. ಕೂಡಲೇ ಸರ್ಕಾರ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಡಿಸಿಎಂ ದಿಕೆ ಶಿವಕುಮಾರ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.