ಹಾಸನ– ಜಿಲ್ಲೆಯಲ್ಲಿ ಬಿಳಿಸುಳಿ ರೋಗದಿಂದ ನಾಶವಾಗುತ್ತಿರುವ ಮೆಕ್ಕೆಜೋಳ ನಷ್ಟದ ಅಧ್ಯಯನಕ್ಕೆ ರಾಜ್ಯ ಸರ್ಕಾರ ಅಧಿಕಾರಿಗಳು-ವಿಜ್ಞಾನಿಗಳನ್ನೊಳಗೊಂಡ 4 ತಂಡಗಳನ್ನು ಜಿಲ್ಲೆಗೆ ಕಳಿಸಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಹಿಂದೆ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತಿತ್ತು. ಇದೇ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು. ಈಗ ಅದು ಕೇವಲ 4 ಸಾವಿರ ಹೆಕ್ಟೇರ್‍ಗೆ ಕುಸಿದಿದೆ. ಇದೀಗ ಮೆಕ್ಕೆಜೋಳಕ್ಕೆ ರೋಗ ಅಂಟಿದ್ದು, ಇದು ಉಲ್ಬಣಿಸಿದರೆ ಹೈನೋದ್ಯಮದಲ್ಲಿ ತೊಡಗಿರುವ ರೈತರು ಹಾಗೂ ಜಾನುವಾರು ತೊಂದರೆಗೆ ಸಿಲುಕಲಿವೆ ಎಂದರು.
ಜಿಲ್ಲೆಯ ಅನೇಕ ಕಡೆಗಳಲ್ಲಿ ಮಣ್ಣ್ಣಿನ ಆರೋಗ್ಯ ಹಾಳಾಗಿದೆ, ತೋಟಗಾರಿಕೆ ಇಲಾಖೆಯಲಿ 263 ಮಂದಿ ಕೆಲಸ ನಿರ್ವಹಿಸಬೇಕು. ಆದರೆ ಇರುವುದು 130 ಮಂದಿ ಮಾತ್ರ. ಅರ್ಧಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇದ್ದರೆ ರೈತರಿಗೆ ಯಾವ ರೀತಿಯ ಪರಿಹಾರ ನೀಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಕೂಡಲೇ ಖಾಲಿ ಹುದ್ದೆ ಭರ್ತಿ ಮಾಡಿ ಎಂದು ಒತ್ತಾಯಿಸಿದರು.
ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಜಿಲ್ಲೆಯಲ್ಲಿ 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಈಗ ಕೇವಲ 40 ಸಾವಿರಕ್ಕೆ ಬಂದಿದೆ. ಹಾಲಿ 8-10 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ.\ರೋಗ ಹತೋಟಿಗೆ ಬರಲು 4-5 ಬಾರಿ ಔಷಧ ಸಿಂಪಡಿಸಬೇಕು. ಹೀಗೆ ಮಾಡಿದರೆ ಮಣ್ಣಿಗೆ ಹಾನಿಯಾಗುತ್ತದೆ. ಹಿಂದೆ ಆಲೂಗೆಡ್ಡೆ, ಈಗ ಮೆಕ್ಕೆಜೋಳ ರೋಗಕ್ಕೆ ತುತ್ತಾಗಿದ್ದು, ರಾಗಿಯೊಂದು ಉಳಿದಿದೆ. ಹಾಗಾಗಿ ರಾಜ್ಯ ಸರ್ಕಾರ ತಂಡಗಳನ್ನು ಕಳಿಸಿ ರೈತರಿಂದ ಮಾಹಿತಿ ಪಡೆದು ಅದಕ್ಕೆ ತಕ್ಕಂತೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ತೋಟಗಾರಿಕೆ ಬೆಳೆಯನ್ನೂ ರೈತರು ಕಳೆದುಕೊಳ್ಳುತ್ತಿದ್ದಾರೆ ಎಂದರು. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಹಾಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕು, ಪರಿಹಾರ ಕೊಡಬೇಕು ಎಂದು ವಿನಂತಿಸಿದ ಅವರು, ಬಿಳಿಸುಳಿ ರೋಗಕ್ಕೆ ಕಾರಣ ಕಂಡು ಹಿಡಿಯುವುದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದರು. ಕೂಡಲೇ ಕೃಷಿ ಸಚಿವರು ಈ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಿ ಮುಂದೆ ಏನು ಮಾಡಬೇಕೆಂದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಬಸವಘಟ್ಟ ಗಾ.ಪಂ. ಸದಸ್ಯ, ಗುತ್ತಿಗೆದಾರರ ನಡುವಿನ ಜಗಳವನ್ನು ಬಗೆಹರಿಸುವ ಬದಲು 307 ಕೇಸ್ ದಾಖಲಿಸಿ ರೌಡಿಶೀಟರ್ ಹಾಕಿದ್ದಾರೆ. ಕೊಲೆ ಮಾಡಿರುವ ಎಷ್ಟು ಜನರ ಮೇಲೆ ರೌಡಿಶೀಟರ್ ಹಾಕಿದ್ದಾರೆ ಎಂದು ಮತ್ತೆ ಪ್ರಶ್ನಿಸಿದರು.
ದೂರು ನೀಡಲು ಹೋದರೆ ತೆಗೆದುಕೊಳ್ಳುವುದಿಲ್ಲ ಎಂದರೆ ಯಾರ ಬಳಿ ಹೇಳಬೇಕು, ನಾನು ಪೆÇಲೀಸ್ ಠಾಣೆಗೆ ಕರೆ ಮಾಡಿ, ರೌಡಿಶೀಟರ್ ದಾಖಲಿಸಿ ಎಂದು ಹೇಳಿರುವುದನ್ನು ತೋರಿಸಿದರೆ ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು.
ಪ್ರತಿ ದಿನ ಮೊಬೈಲ್ ಕಳುವಾಗುತ್ತಿದ್ದು, ಮನೆಗಳನ್ನು ದೋಚಲಾಗುತ್ತಿದೆ. ಇದನ್ನು ಕೇಳಬಾರದ, ಜೆಡಿಎಸ್ ಕಾರ್ಯಕರ್ತರು ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಿ, ಅದನ್ನು ಬಿಟ್ಟು ಪಕ್ಷಪಾತ ಮಾಡಬಾರದೆಂದರು.