ಸಾಥಿ ಅಭಿಯಾನ ಯಶಸ್ವಿಗೊಳಿಸಿ : ನ್ಯಾ. ದಾಕ್ಷಾಯಿಣಿ ಜಿ ಕೆ.

0
10

ಹಾಸನ : ಜಿಲ್ಲೆಯಲ್ಲಿ ಯಾವುದೇ ಪರಿತ್ಯಕ್ತ ಮಕ್ಕಳು, ಇನ್ನಿತರೆ ಮಕ್ಕಳು ಆಧಾರ್ ನೋಂದಣಿಯಾಗದೆ ಹೊರಗುಳಿಯದಂತೆ ಗುರುತಿಸಿ ಆಧಾರ್ ನೋಂದಣಿ ಮಾಡಿಸುವ ಮೂಲಕ ಸಾಥಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ ಕೆ ಅವರು ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಸಾಥಿ ಅಭಿಯಾನ ಸಮಿತಿಯ ಸದಸ್ಯರಿಗಾಗಿ ಸಭೆಯಲ್ಲಿ ಮಾತನಾಡಿದ ಅವರು, ಪಾಲನೆ ಮತ್ತು ಸಂರಕ್ಷಣೆ ಅಗತ್ಯವಿರುವ ಮಕ್ಕಳಿಗೆ ಆಧಾರ್ ನೋಂದಣಿ ಸರ್ಕಾರಿ ಯೋಜನೆಗಳ ಒದಗಿಸುವಿಕೆ ಮತ್ತು ಮಕ್ಕಳ ಗುರುತಿಸುವಿಕೆಗಾಗಿ ಸಾಥಿ ಅಭಿಯಾನ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಸಾಥಿ ಅಭಿಯಾನದ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಸದಸ್ಯರಾಗಿ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ, ಜಿಲ್ಲೆಯ ಎಲ್ಲಾ ತಹಶೀಲ್ದಾರರು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು, ಸ್ವಯಂ ಸೇವಾ ಸಂಸ್ಥೆಯ ಸದಸ್ಯರುಗಳು, ಪ್ಯಾನಲ್ ವಕೀಲರು, ಅರೆಕಾಲಿಕ ಸ್ವಯಂ ಸೇವಕರುಗಳನ್ನು ನೇಮಿಸಲಾಗಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಂದೆ ತಾಯಿ ಇಲ್ಲದ ಮಕ್ಕಳು, ವಲಸೆ ಸೇರಿದಂತೆ ಇತರೆ ಕಾರಣಗಳಿಂದ ಆಧಾರ್ ಹೊಂದಿರದ ಮಕ್ಕಳನ್ನು ಗುರುತಿಸಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಡಲು ಸಾಥಿ ಅಭಿಯಾನ ಕೈಗೊಳ್ಳಲಾಗುತ್ತಿದೆ. ಈ ಕೂಡಾ ಸರ್ಕಾರಿ ಸೌಲಭ್ಯಗಳನ್ನು ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಾಥಿ ಅಭಿಯಾನದಡಿ ಆಧಾರ್ ಹೊಂದಿರದ ಮಕ್ಕಳನ್ನು ಗುರುತಿಸುವಿಕೆಯ ಸಮೀಕ್ಷೆಯನ್ನು ನಡೆಸಲಾಗುವುದು. ಸಮೀಕ್ಷೆ ಯಶಸ್ವಿಯಾಗಿ ನಡೆಸಲು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ನೌಕರರು, ಕಾರ್ಮಿಕ ಅಧಿಕಾರಿಗಳು, ಪೊಲೀಸ್ ಇಲಾಖೆ ಮಕ್ಕಳ ರಕ್ಷಣಾ ಘಟಕ, ಎನ್ ಜಿ ಓ ಗಳು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಹಕಾರವನ್ನು ನೀಡಲಿದ್ದು ಜೂ.೨೬ ರ ಒಳಗೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿ ಆ.೫ ರ ಒಳಗಾಗಿ ಆಧಾರ್ ಇಲ್ಲದ ಮಕ್ಕಳಿಗೆ ಆಧಾರ್ ನೋಂದಣಿ ಮಾಡುವ ಕಾರ್ಯ ಪೂರ್ಣಗೊಳ್ಳುವುದು. ಸಾರ್ವಜನಿಕರು ಕೂಡಾ ಈ ಅರಿವು ಮೂಡಿಸಿಕೊಂಡು ಅಭಿಯಾನದಲ್ಲಿ ಕೈ ಜೋಡಿಸಬಹುದಾಗಿದ್ದು ಸೌಲಭ್ಯವಂಚಿತ ಮಕ್ಕಳಿಗೆ ಸೌಲಭ್ಯಗಳನ್ನು ಕೊಡಿಸಲು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

                                     ಹಾಸನ ಸಮಾಚಾರ