ಯುವತಿಯ ಜೊತೆ ಪಾರ್ಕ್ ನಲ್ಲಿ ಕುಳಿತಿದ್ದ ವೀಡಿಯೋ ವೈರಲ್ : ಮನನೊಂದು ಯುವಕ ಆತ್ಮಹತ್ಯೆ

0
49

ಹಾಸನ ಸಮಾಚಾರ : ಹಾಸನ

ಪಾರ್ಕ್ ನಲ್ಲಿ ಯುವತಿಯೊಂದಿಗೆ ಸಲುಗೆಯಿಂದ ವರ್ತಿಸಿದ ವೀಡಿಯೋ ಇನ್ಸ್ತಾಗ್ರಾಮ್ ನಲ್ಲಿ ವೈರಲ್ ಆದ ಕಾರಣಕ್ಕೆ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.

ಹಾಸನ ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದ ಪವನ್ ಕೆ. (21), ಅಂತಿಮ ವರ್ಷದ ಬಿಎ ವಿದ್ಯಾರ್ಥಿ, ತಾನು ಉದ್ಯಾನವನದಲ್ಲಿ ಯುವತಿಯೊಬ್ಬಳ ಕೈಯ್ಯನ್ನು ಆತ್ಮೀಯವಾಗಿ ಹಿಡಿದು ಕುಳಿತುಕೊಂಡಿದ್ದ ವಿಡಿಯೋ ಇನ್ಸಾಗ್ರಾಂನಲ್ಲಿ ಹರಿದಾಡಿದಿದ್ದರಿಂದ ಮನನೊಂದು ಕೊಟ್ಟಿಗೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಬುಧವಾರ ಮಧ್ಯಾಹ್ನ ಹಾಸನದ ಮಹಾರಾಜ ಪಾರ್ಕ್‌ನಲ್ಲಿ ಇಬ್ಬರು ಸ್ನೇಹಿತೆಯರ ಜೊತೆ ಕುಳಿತಿದ್ದ ಪವನ್, ಓರ್ವ ಆತ್ಮೀಯವಾಗಿ ಯುವತಿಯೊಂದಿಗೆ ಮಾತನಾಡುತ್ತಿರುವುದನ್ನು ಅಪರಿಚಿತ ಯುವತಿ ವಿಡಿಯೋ ಮಾಡಿ chinnivasi8 ಖಾತೆಯ ಮೂಲಕ ಇನ್ಸಾಗ್ರಾಂನಲ್ಲಿ ಹರಿಯಬಿಟ್ಟಿದ್ದಳು. ವಿಡಿಯೋದಲ್ಲಿ ಯುವತಿ, ಅವರ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವಾಯ್ಸ್ ಓವರ್ ನೀಡಿದ್ದಳು.

ಈ ವಿಡಿಯೋ ವೀಕ್ಷಿಸಿದ ಪವನ್ ಸಹಪಾಠಿಗಳು ಹಾಗೂ ಅನೇಕರಿಂದ ಟೀಕೆ, ವ್ಯಂಗ್ಯ ಕಾಮೆಂಟ್‌ಗಳು ಹರಿದಾಡಿದ್ದವು, ಇದರ ಪರಿಣಾಮವಾಗಿ ತನ್ನೊಂದಿಗಿದ್ದ ಯುವತಿಯರಿಗೆ ತೊಂದರೆ ಆಗಬಹುದು ಎಂಬ ಆತಂಕದಲ್ಲಿ ಪವನ್ ತೀವ್ರ ಮನೋಕ್ಷೇಶಕ್ಕೆ ಒಳಗಾಗಿದ್ದ.

ಇನ್ಸಾಗ್ರಾಂನಿಂದ ವಿಡಿಯೋ ಡಿಲೀಟ್ ಮಾಡಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಪರಿತಪಿಸಿದ್ದ. ಗುರುವಾರ ಕಾಲೇಜು ಮುಗಿಸಿ ಮನೆಗೆ ಬಂದ ಪವನ್ ಕೊಟ್ಟಿಗೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನನ್ನು ಗಾರೆ ಕೆಲಸ ಮಾಡಿ ಸಾಕುತ್ತಿದ್ದ ಪವನ್ ತಾಯಿ ಪುಟ್ಟಲಕ್ಷ್ಮೀ ಈಗ ದುಃಖ ಸಾಗರದಲ್ಲಿ ಮುಳುಗಿದ್ದು, ಮಗನ ಸಾವಿಗೆ ಕಾರಣಳಾದ ಯುವತಿಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

“ಮುಂದೆ ಇಂಥ ಮಾನಹಾನಿ ಯಾರಿಗೂ ಆಗಬಾರದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು” ಎಂದು ಬಂಧುಬಳಗ ಒತ್ತಾಯ ವ್ಯಕ್ತಪಡಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.