ವರದಿ : ದಿನೇಶ್ ಬೆಳ್ಳಾವರ.
ಭಾರತ ದೇಶದ ಕಟ್ಟಕಡೆಯ ಹಳ್ಳಿಗಳಿಗೂ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರತಿ ದಿನ ಬೊಬ್ಬಿಡುತ್ತಿವೆ. ಆದರೆ ಬೇಲೂರು ತಾಲ್ಲೂಕಿನ ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಪ್ರತಿದಿನ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಮೂಲಭೂತ ಸೌಕರ್ಯ ಒದಗಿಸಬೇಕಾದ ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಹೌದು,,,, ಹಳ್ಳಿಗಳು ರಾಷ್ಟ್ರದ ಬೆನ್ನೆಲುಬು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಅನೇಕ ಗ್ರಾಮಗಳು ಗಾಂಧೀಜಿಯವರ ಮಾತುಗಳಿಂತೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದರೆ ಇನ್ನೂ ಕೆಲ ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಬಿಕ್ಕೋಡು ಹೋಬಳಿ ವ್ಯಾಪ್ತಿಯ ಬೊಮ್ಮಡಿಹಳ್ಳಿ ಗ್ರಾಮ. ಇಲ್ಲಿ ಸರಿಸುಮಾರು 60 ರಿಂದ 70 ದಲಿತ ಕುಟುಂಬಗಳು ಜೀವನ ನಡೆಸುತ್ತಿರು ಗ್ರಾಮ, ಗ್ರಾಮದಲ್ಲಿ ವ್ಯವಸ್ಥಿತವಾದ ಚರಂಡಿಗಳಿಲ್ಲ, ರಸ್ತೆಗಳಿಲ್ಲ, ಇರುವ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ, ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ, ಕೊಳಚೆ ನೀರಿನಲ್ಲಿ ಸಾರ್ವಜನಿಕರು, ಮಕ್ಕಳು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದರು ಸ್ಪಂದಿಸಿಲ್ಲ, ಗ್ರಾಮ ಪಂಚಾಯತಿ ಪಿಡಿಒ ಗ್ರಾಮಗಳ ಕಡೆ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ವಿಚಾರವಾಗಿ ಬೊಮ್ಮಡಿಹಳ್ಳಿ ಗ್ರಾಮಸ್ಥರಾದ ಸುನೀಲ್ ಮತ್ತು ದರ್ಮೇಶ್ ಮಾತನಾಡಿ, ನಮ್ಮ ಊರಿನಲ್ಲಿ ಸರಿಸುಮಾರು 60 ರಿಂದ 70 ಕುಟುಂಬಗಳು ವಾಸಮಾಡುತ್ತಿದ್ದೇವೆ, ಈಗಾಗಲೇ ನಮ್ಮ ಗ್ರಾಮದ ಸಮಸ್ಯೆಗಳನ್ನು ಕೋಗಿಲೆಮನೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹೇಳಿದರು ಯಾವುದೇ ರೀತಿಯ ಪ್ರಯೋಜನೆಯಾಗುತ್ತಿಲ್ಲ, ಗ್ರಾಮದ ಅಂಗನವಾಡಿ ಕೇಂದ್ರ ಸಂಪೂರ್ಣವಾಗಿ ಬೀಳುವ ಸ್ಥಿತಿ ತಲುಪಿದೆ, ಮುಂದೆ ಏನಾದರೂ ಅನಾಹುತ ಸಂಭವಿಸುವಬಹುದು ಎಂಬ ನಿಟ್ಟಿನಲ್ಲಿ ಖಾಸಗಿ ಮನೆಯಲ್ಲಿ ಮಕ್ಕಳನ್ನು ಕೂರಿಸಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದೇವೆ, ಚುನಾವಣೆ ಸಂದರ್ಭದಲ್ಲಿ ನಮ್ಮೂರಿನ ಗ್ರಾಮಸ್ಥರಿಗೆ ಕೈ ಮುಗಿದು ಹಲವು ಭರವಸೆಗಳನ್ನ ನೀಡಿದ್ದ ಶಾಸಕರು ನಮ್ಮ ಊರಿನ ಬಗ್ಗೆ ಗಮನ ಹರಿಸುತ್ತಿಲ್ಲ ದಯವಿಟ್ಟು ನಮ್ಮ ಊರಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಎಂದು ಮನವಿ ಮಾಡಿದರು.