ಹಾಸನ: ಜಿಲ್ಲೆಗೆ ಯಾವುದೇ ಅಭಿವೃದ್ಧಿ ಅನುದಾನವೇ ನೀಡದ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಸದಸ್ಯರು ಹಾಸನಕ್ಕೆ ಬರುವುದು ಹಾಸ್ಯಾಸ್ಪದ ಇನ್ನು ಇಲ್ಲಿಗೆ ಬಂದರೂ ಅವರ ಕೊಡುಗೆ ಶೂನ್ಯ ಎಂದು ಬಿಜೆಪಿ ಮುಖಂಡ ಮತ್ತು ವಕೀಲ ಜಿ. ದೇವರಾಜೇಗೌಡ ತೀವ್ರ ಟೀಕಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬುಧವಾರ ಮಾತನಾಡಿದ ಅವರು, ಜಿಲ್ಲೆಗೆ ಇವರ ಕೊಡುಗೆ ಏನು? ಎಷ್ಟು ಅನುದಾನ ನೀಡಿದ್ದಾರೆ. ಅವರ ಅವಧಿಯಲ್ಲಿ ಏನು ಅಭಿವೃದ್ಧಿ ನಡೆದಿದೆ? ಎಂದು ನೇರ ಪ್ರಶ್ನೆ ಎಸೆದರು. ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ತೀವ್ರವಾಗಿದ್ದು, ರೈತರು ಬೆಳೆ ಪರಿಹಾರ, ಬೆಂಬಲ ಬೆಲೆ ಬೇಡಿಕೆಗಳಿಗೆ ಸ್ಪಂದನೆ ಸಿಗದ ಕಾರಣ ಪ್ರತಿಭಟನೆ ನಡೆಸುತ್ತಿರುವುದನ್ನು ಉದಾಹರಿಸಿದ ಅವರು, ಕಬ್ಬು ಬೆಳೆಗಾರರ ಮೇಲೆ ಲಾಠಿ ಚಾರ್ಜ್ ನಡೆದಿರುವುದನ್ನೂ ಖಂಡಿಸಿದರು. ನಿರುದ್ಯೋಗ ನಿವಾರಣೆಗೆ ಕ್ರಮವಿಲ್ಲ, ಆದರೆ ಸಿಎಂ-ಡಿಸಿಎಂ ಬ್ರೇಕ್‍ಫಾಸ್ಟ್ ರಾಜಕೀಯದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ಕಟುವಾಗಿ ವಿಪಕ್ಷಿಸಿದರು. ಹಾಸನದಲ್ಲಿ ನಿರ್ಮಾಣವಾದ ಹೊಸ ತಾಲೂಕು ಕಚೇರಿ, ಹೈಟೆಕ್ ಬಸ್ ನಿಲ್ದಾಣ ಬಳಿಯ ಉದ್ಯಾನ, ಅಗ್ನಿಶಾಮಕ ಠಾಣೆ, ಗ್ರಂಥಾಲಯ ಎಲ್ಲಾ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನಡೆದ ಕೆಲಸಗಳೆಂದು ಅವರು ನೆನಪಿಸಿದರು. ಸಿಎಂ ಕಾರ್ಯಕ್ರಮಕ್ಕೆ 4 ಕೋಟಿ ರೂ. ವೆಚ್ಚ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಅಷ್ಟು ಹಣ ಕೊಟ್ಟಿದ್ದಾರಾ? ಯಾವ ಮುಖ ಹೊತ್ತು ಹಾಸನಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನಾತ್ಮಕವಾಗಿ ಕೂಗಿದರು. ನೈತಿಕತೆ ಇದ್ದರೆ ಸಿಎಂ ಈ ಕಾರ್ಯಕ್ರಮವೇ ರದ್ದುಪಡಿಸಬೇಕು. ಆ ಹಣವನ್ನು ಸಂಬಳ ಬಾಕಿ ಇರುವ ಇಲಾಖೆಗೆ ನೀಡಬೇಕು” ಎಂದು ಒತ್ತಾಯಿಸಿದ ಅವರು, ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಹೈಕೋರ್ಟ್ ಪ್ರಜ್ವಲ್ ರೇವಣ್ಣ ಅರ್ಜಿ ವಜಾ ಮಾಡಿರುವ ತೀರ್ಪಿನ ನಂತರ, ಹಾಸನದ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಅವರು ತೀವ್ರ ಹೇಳಿಕೆ ನೀಡಿದ್ದು, ತೀರ್ಪು ಸಮಾಜದ ಹಿತವನ್ನು ಗಮನದಲ್ಲಿ ಇಟ್ಟುಕೊಂಡೇ ಬಂದಿದೆ ಎಂದು ಶ್ಲಾಘಿಸಿದರು. ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗುತ್ತೆ. ಕಾನೂನು ಎಲ್ಲರಿಗೂ ಸಮಾನ ಎಂದು ಪ್ರತಿಕ್ರಿಯಿಸಿದರು. ಸರ್ಕಾರಿ ವಕೀಲರು ಸಮರ್ಥವಾದ ವಾದ ಮಂಡನೆ ಮಾಡಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿ, ನ್ಯಾಯಾಲಯ ಮಾನವೀಯತೆಯನ್ನು ಎತ್ತಿಹಿಡಿದಿದೆ. ಸಮಾಜಕ್ಕೆ ಮಾದರಿ ಆಗುವವರು ತಪ್ಪು ಮಾಡಿದರೆ ಸಮಾಜವೇ ತಿರಸ್ಕರಿಸುತ್ತದೆ ಎಂದು ತಿಳಿಸಿದರು. ಪ್ರಜ್ವಲ್ ರೇವಣ್ಣ ಸುಪ್ರೀಂ ಕೋರ್ಟ್‍ಗೆ ಹೋಗುವ ಅವಕಾಶ ಇನ್ನೂ ಇದೆ ಎಂಬುದನ್ನೂ ಅವರು ನೆನಪಿಸಿದರು. ಪ್ರಜ್ವಲ್ ಇಲ್ಲ ಅಂದರೆ ಮತ್ತೊಬ್ಬ ನಾಯಕ ಬರುತ್ತಾನೆ. ರೇವಣ್ಣ ಕುಟುಂಬ ಇಲ್ಲದೆ ಹೋದರೂ ಜಿಲ್ಲೆ ಅಭಿವೃದ್ಧಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ವಿಪಕ್ಷ ನಾಯಕರು ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಸರಿಯಾಗಿ ಕೆಲಸ ಮಾಡ್ತಿಲ್ಲ ಎಂದು ನಿಗ್ರಹವಿಲ್ಲದೇ ಟೀಕಿಸಿದರು. ಅವರು ಸರಿಯಾಗಿ ಕೆಲಸ ಮಾಡಿದ್ದರೆ ಈ ಸರ್ಕಾರ ಈಗಾಗಲೇ ಪತನ ಆಗಬೇಕಿತ್ತು. ಆರ್. ಅಶೋಕ್ ಮಾಧ್ಯಮ ಹೇಳಿಕೆ ನೀಡಿ ಸುಮ್ಮನಾಗ್ತಾರೆ ಎಂದು ಕಿಡಿಕಾರಿದರು. ನಾನು ಸರ್ಕಾರದ ವಿರುದ್ಧ 18 ಕೇಸ್ ಹಾಕಿದ್ದೇನೆ. ಮೂಡ ಹಗರಣದಲ್ಲಿ ಕೂಡ ಬೆಂಬಲ ಕೊಡಲಿಲ್ಲ. ದೂರುದಾರನಿಗೆ ಬೆಂಬಲ ಕೊಡ್ತೇನೆ ಅಂತ ಹೇಳಿದ ವಿಜಯೇಂದ್ರ, ನನಗೆ ಯಾಕೆ ಬೆಂಬಲ ಕೊಡ್ತಿಲ್ಲ? ಎಂದು ಪ್ರಶ್ನಿಸಿದರು. ರಾಜ್ಯದ ಬೆಳವಣಿಗೆಗಳ ಬಗ್ಗೆ ವರಿಷ್ಠರಿಗೆ ದೂರು ನೀಡಿದ್ದೇನೆ ಎಂದು ಹೇಳಿದರು.