ನಾಯಕತ್ವ ಬದಲಾವಣೆ ನಡುವೆಯೇ ದಲಿತ ಹೋರಾಟಗಾರರ ಗಟ್ಟಿಯಾದ ಆಗ್ರಹ
ಬೇಲೂರು
ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಸದ್ದಿಲ್ಲದೆ ಮುಂದುವರಿದಿರುವ ಸಂದರ್ಭದಲ್ಲಿ, ದಲಿತ ಸಮುದಾಯದ ನಾಯಕರು ಮತ್ತು ಹೋರಾಟಗಾರರು ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದೆರಡು ತಿಂಗಳಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಚಾರ ಹೆಚ್ಚಾಗಿದ್ದರೂ, ಕಾಂಗ್ರೆಸ್ ಪಕ್ಷವು ದಲಿತ ಸಮುದಾಯಕ್ಕೆ ನ್ಯಾಯ ಕೊಡುತ್ತಿಲ್ಲ ಎನ್ನುವ ಆರೋಪವನ್ನು ಬೇಲೂರು ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮಂಜುನಾಥ್ ಮಾಡಿದ್ದಾರೆ.
ಈ ವಿಚಾರವಾಗಿ ಪಟ್ಟಣದ ವೇಲಾಪುರಿ ಹೊಟೇಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕೆಲವೇ ನಾಯಕರಿಗೆ ಗುತ್ತಿಗೆ ನೀಡಿರುವಂತಾಗಿದೆ ಎಂದು ಟೀಕಿಸಿದ ದಲಿತ ಹೋರಾಟಗಾರರು, ಕರ್ನಾಟಕದಲ್ಲಿ ದಲಿತ ಸಿಎಂ ಮಾಡುವ ಮನಸ್ಸು ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ರಾಜ್ಯದಲ್ಲಿರುವ 36 ದಲಿತ ಶಾಸಕರು ಮೌನ ವಹಿಸಿರುವುದಕ್ಕೆ ಪ್ರಶ್ನೆ ಮಾಡಿ, ಈಗಲೇ ಸರಿಯಾದ ಸಮಯ, ದಲಿತರಿಗೆ ಸಿಎಂ ಸ್ಥಾನ ನೀಡಲು ಹೋರಾಡಬೇಕು ಎಂದು ಒತ್ತಾಯಿಸಿದರು. ಡಿಕೆ ಶಿವಕುಮಾರ್ ಅವರಿಗೆ ಒಂದು ಅವಧಿ, ನಂತರ ದಲಿತರಿಗೆ ಒಂದು ಅವಧಿ ಸಿಎಂ ಸ್ಥಾನ ನೀಡಬೇಕು ಎಂದ ಅವರು, ಅದೂ ಇಲ್ಲ, ಇದೂ ಇಲ್ಲ ಅಂದರೆ ರಾಜ್ಯದಾದ್ಯಂತ ದಲಿತ ಪರ ಹೋರಾಟಗಾರರು ಒಗ್ಗೂಡಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂಬ ಎಚ್ಚರಿಕೆ ನೀಡಿದರು. ಕೇವಲ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಸುತ್ತಲೇ ಮುಖ್ಯಮಂತ್ರಿ ಹುದ್ದೆ ಸೀಮಿತಗೊಂಡಿರುವ ರೀತಿಗೆ ಅಸಮಾಧಾನಗೊಂಡ ಹೋರಾಟಗಾರರು, ದಲಿತರಿಗೆ ಅವಕಾಶ ಕಡ್ಡಾಯ ಎಂಬ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸಿದರು. ರಾಜ್ಯದ ಎಲ್ಲಾ ದಲಿತ ಒಕ್ಕೂಟಗಳ ನಾಯಕರು ಒಟ್ಟಾಗಿ ಬಂದು ಹೋರಾಡಬೇಕು ಎಂಬ ಆಹ್ವಾನವನ್ನು ನೀಡಿದರು. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಆಗಲು ಜಿ. ಪರಮೇಶ್ವರ್ ಅವರಂತಹ ನಾಯಕರು ಸಮರ್ಥರು ಎಂದು ಬಿಂಬಿಸಲಾಯಿತು. ಜಿ. ಪರಮೇಶ್ವರ್ ಅವರು ಸಿಎಂ ಆಗಲು ಉಳಿದ ದಲಿತ ಶಾಸಕರು ಬೆಂಬಲಿಸಬೇಕು ಎಂದೂ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಿಹಳ್ಳಿ ಕುಮಾರ್, ಎಂ.ಜಿ ವೆಂಕಟೇಶ್ ಉಪಸ್ಥಿತರಿದ್ದರು.