ಹಾಸನ: ಸರ್ಕಾರವು ಇತ್ತೀಚೆಗೆ ನಗರದಲ್ಲಿ ಭಾರಿ ಜಾಹೀರಾತಿನೊಂದಿಗೆ ಆಯೋಜಿಸಿದ ಸರ್ಕಾರಿ ಸೇವೆಗಳ ಸಮರ್ಪಣಾ ಸಮಾವೇಶ ಇದೀಗ ಹೊಸ ವಿವಾದಕ್ಕೆ ತುತ್ತಾಗಿದ್ದು, ಸಮಾವೇಶಕ್ಕೆ ತೆರವಾದ ನಿಜವಾದ ವೆಚ್ಚವನ್ನು ಜಿಲ್ಲಾಡಳಿತ ಬಹಿರಂಗಪಡಿಸದಿರುವುದು ಗಮನ ಸೆಳೆದಿದ್ದು, ಸಾರ್ವಜನಿಕ ಹಣದ ಲೆಕ್ಕ ಜನರಿಗೆ ತಿಳಿಯಲೇಬೇಕು ಎಂದು ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ತೀವ್ರವಾಗಿ ಪ್ರಶ್ನೆ ಎತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಸಮಾವೇಶಕ್ಕೆ ಊರು-ಹಳ್ಳಿಗಳಿಂದ ಸಾವಿರಾರು ಫಲಾನುಭವಿಗಳನ್ನು ಕರೆಸಿಕೊಂಡಿದ್ದರೂ, ವೇದಿಕೆಯ ಮೇಲೆ ಸಾಂಕೇತಿಕವಾಗಿ ಕೆಲವರಿಗೆ ಮಾತ್ರ ಸೌಲಭ್ಯ ವಿತರಣೆ, ಉಳಿದವರು ಕೈಚೆಲ್ಲದೇ ಮನೆಗೆ ಹಿಂತಿರುಗಬೇಕಾದ ಪರಿಸ್ಥಿತಿ ಉಂಟಾಯಿತು. ಈ ಎಲ್ಲಾ ಘಟನೆಗಳು ಜನರಲ್ಲಿ ಅಸಮಾಧಾನ ಮೂಡಿಸಿದೆ. ಕಂದಾಯ ಇಲಾಖೆ ಉತ್ತಮ ಕೆಲಸ ಮಾಡಲಾಗಿದೆ. ಅದಕ್ಕಾಗಿ ನಾನು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರನ್ನು ಅಭಿನಂದಿಸುತ್ತೇನೆ. ಆದರೆ ಸಮಾವೇಶದಲ್ಲಿ ಎಲ್ಲಾ ಫಲಾನುಭವಿಗಳಿಗೂ ಸೌಲಭ್ಯ ವಿತರಣೆ ಮಾಡುವುದಾಗಿ ಜನರನ್ನು ಸೇರಿಸಿ ಸಮಾವೇಶದಲ್ಲಿ ಸಾಂಕೇತಿಕವಾಗಿ ನಾಲ್ಕು ಮಂದಿಗೆ ಸೌಲಭ್ಯ ವಿತರಿಸಿ ಉಳಿದವರನ್ನು ಬರಿಗೈಯಲ್ಲಿ ಕಳಿಸಿದ್ದಾರೆ. Ëಲಭ್ಯ ಪಡೆದುಕೊಳ್ಳುವ ಆಸೆಗಾಗಿ ಅಂದು ಸಮಾವೇಶಕ್ಕೆ ಬಂದವರಿಗೆ ಇನ್ನೂ ಕೂಡ ಸೌಲಭ್ಯ ಸಿಗದೆ ನಿತ್ಯ ಸರ್ಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರವು ಕಳೆದ ಎರಡೂವರೆ ವರ್ಷದಲ್ಲಿ ಜಿಲ್ಲೆಗೆ ಎಷ್ಟು ಅನುದಾನ ಮಂಜೂರು ಮಾಡಲಾಗಿದೆ. ಉದ್ಘಾಟನೆ ಗೊಂಡಿರುವ ಕಾಮಗಾರಿಗಳಿಗೆ ನಿಮ್ಮ ಸರ್ಕಾರದ ಅನುದಾನ ಎಷ್ಟು ಎಂಬ ಕುರಿತು ಮಾಹಿತಿ ನೀಡುವಂತೆ ಒತ್ತಾಯಿಸಿದರು. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಾಣ ಭರವಸೆ ನೀಡಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಈ ಹಿಂದೆ ನಾವು ಕೂಡ ಪ್ರಯತ್ನ ಮಾಡಿದ್ದೆವು. ಆದರೆ ಸಾಕರವಾಗಿರಲಿಲ್ಲ. ಇದು ಕೇವಲ ಭರವಸೆಯಾಗಿ ಉಳಿಯಬಾರದು. ಈ ಹಿಂದೆಯೂ ಮಲೆನಾಡು ಭಾಗದಲ್ಲಿ ರಸ್ತೆ ಕುಸಿತ ತಡೆಗೆ 299 ಕೋಟಿಯನ್ನು ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಆದರೆ ಇದುವರೆಗೂ ಒಂದು ಅನುದಾನ ನೀಡಿಲ್ಲ. ಕೇವಲ ಅನುಷ್ಠಾನಕ್ಕೆ ಸೀಮಿತವಾಗಬಾರದು ಎಂದರು. ರಾಜ್ಯ ಸರ್ಕಾರ ಅಭಿವೃದ್ಧಿ ಬದಲು ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದಲ್ಲಿ ಶೇ. 80 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಭಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲೇ ಐದನೇ ಸ್ಥಾನದಲ್ಲಿದೆ. ಎಸ್ಸಿ, ಎಸ್ಟಿಸಮುದಾಯದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಬಜೆಟ್ ನಲ್ಲಿ ಘೋಷಿಸಿದ ಅನುದಾನದಲ್ಲಿ 930 ಕೋಟಿ ಅನುದಾನ ಬಳಕೆಯಾಗಿಲ್ಲ ಎಂದು ಆರೋಪಿಸಿದರು.
ಅರ್ಜುನ ಆನೆ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಪ್ರತಿಭಟನೆ ನಡೆಸಿದ ಹೋರಾಟಗಾರರ ವಿರುದ್ದ ಪ್ರಕರಣ ದಾಖಲಿಸಿರುವ ಕುರಿತು ಪ್ರತಿಕ್ರಯಿಸಿದ ಎಚ್.ಕೆ. ಕುಮಾರಸ್ವಾಮಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ತಮ್ಮ ಇಲಾಖೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸಲುವಾಗಿ ಹಾಗೂ ಮಲೆನಾಡು ಭಾಗದ ಜನರನ್ನು ಬೆದರಿಸುವ ಸಲುವಾಗಿ ಹೋರಾಟಗಾರರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಇದು ಅತ್ಯಂತ ಖಂಡನೀಯ, ಸರ್ಕಾರ ಕೂಡಲೇ ಪ್ರಕರಣವನ್ನು ಹಿಂಪಡೆಯಬೇಕು ಇಲ್ಲದಿದ್ದರೆ ನಮ್ಮ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ಕಳೆದ ಎರಡು ವರ್ಷಗಳಿಂದಲೂ ಕಾಂಗ್ರೆಸ್ ಸರಕಾರದ ಸಾಧನೆ ಏನು, ಅಭಿವೃದ್ಧಿ ಮರಿಚಿಕೆ, ಕಂದಾಯ ಇಲಾಖೆಯ ಸಾಧನೆ ಹಿಂದಿನಿಂದ ನಡೆದುಕೊಂಡು ಬಂದಿದೆ. ಇವತ್ತಿನಿದಲ್ಲ. ಚಾಲನೆ ಅಷ್ಟು ಕೊಟ್ಟಿದ್ದಾರೆ. ರೋಗ ಮತ್ತೊಂದು ಸಮಸ್ಯೆ ಇರುವುದರಿಂದ ಆಲೂಗೆಡ್ಡೆ ಬೆಳೆಯಲು ಅವಕಾಶವೆ ಇಲ್ಲ. ಜನ ಬದಲಿ ವ್ಯವಸ್ಥೆ ಅಂದುಕೊಂಡು ಮೆಕ್ಕೆ ಜೋಳ ಬೆಳೆಯುತ್ತಿದ್ದಾರೆ. ಈಗ ಇದಕ್ಕೂ ರೋಗ ಬಂದಿದೆ. ಬೆಳೆದ ಬೆಳೆಗೆ ಬೆಲೆ ಇಲ್ಲ. ಒಂದೆ ಒಂದು ಖರೀದಿ ಕೇಂದ್ರ ಆಗಲಿಲ್ಲ. ಜವಬ್ಧಾರಿ ಇಲ್ಲದ ಈ ಸಮಾವೇಶವಾಗಿದೆ ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಮಹಾನಗರ ಪಾಲಿಕೆ ಮಾಜಿ ಮಾಹಾಪೌರ ಗಿರೀಶ್ ಚನ್ನವೀರಪ್ಪ, ಮಾಧ್ಯಮ ವಕ್ತಾರ ಹೊಂಗೆರೆ ರಘು ಇದ್ದರು.





