ವಂಶವೃಕ್ಷದಲ್ಲಿ ಸೊಸೆ ಹೆಸರು ಕೈಬಿಟ್ಟು ಪೌತಿ ಖಾತೆ ಆರೋಪ, ಖಾತೆ ತಡೆ ಹಿಡಿಯದಿದ್ರೆ ಡಿಸಿ ಕಛೇರಿ ಮುಂದೆ ಪ್ರತಿಭಟನೆ : ನಿಂಗರಾಜು ಎಚ್ಚರಿಕೆ.

0
61
ಹಾಸನ: ಪ್ರಮುಖ ಹಿರಿಯ ನಾಗರಿಕರಾದ ಮಲ್ಲಮ್ಮ ಕೋಂ ಸಣ್ಣಯ್ಯ ಅವರಿಗೆ ಸೇರಿದ ಆಸ್ತಿಯ ದಾಖಲೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ, ಕುಟುಂಬದ ನೈಜ ವಾರಸುದಾರರನ್ನು ಪಕ್ಕಕ್ಕೆ ಸರಿಸಿ, ತಪ್ಪು ಮಾಹಿತಿಯ ಆಧಾರದ ಮೇಲೆ ಪೌತಿ ಖಾತೆ ಮಾಡಿಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಸರಿಪಡಿಸದಿದ್ದರೇ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟಿಸುವುದಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಂಗರಾಜು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಆಲೂರು ಪಟ್ಟಣ ಪಂಚಾಯಿತಿಯಲ್ಲಿ ಸಲ್ಲಿಸಲಾದ ದಾಖಲೆಗಳು ನಿಜಸ್ಥಿತಿಗೆ ವಿರುದ್ಧವಾಗಿದೆ. ಸೂಕ್ತ ಪರಿಶೀಲನೆ ಇಲ್ಲದೆ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಖಾತೆ ಮಾಡಲು ಮುಂದಾಗಿರುವುದು ಗಂಭೀರ ಅನ್ಯಾಯ. ತಪ್ಪು ಮಾಹಿತಿಯಲ್ಲಿ ಮಾಡಿದ ಪೌತಿ ಖಾತೆಯನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
1987ರಲ್ಲಿ ಕಾನೂನುಬದ್ಧವಾಗಿ ಖರೀದಿಸಿದ ಆಸ್ತಿ ? ದಾಖಲೆಗಳಲ್ಲಿ ಸ್ಪಷ್ಟ ಗುರುತು ಅರಸೀಕೆರೆ ತಾಲ್ಲೂಕಿನ ದೇವರಹಳ್ಳಿಯ ಡಿ.ಎಂ. ಸಣ್ಣಪ್ಪ ಅವರ ಕುಟುಂಬದ ಮಲ್ಲಮ್ಮ ಅವರು 1987ರ ನವೆಂಬರ್ 10ರಂದು ಜಿ. ಅಬ್ದುಲ್ ಸುಬಾನ್ ಅವರ ಪುತ್ರಿ ಯಾಸ್ಮಿನ್ ಮೊಹುದ್ದೀನ್ ಅವರಿಂದ ನಿವೇಶನವನ್ನು ಖರೀದಿಸಿದ್ದರು. ಸಬ್‍ರಿಜಿಸ್ಟ್ರಾರ್ ಕಚೇರಿಯ ದಾಖಲೆ ಸಂಖ್ಯೆ: 229, ದಿನಾಂಕ: 25/11/1987 ಆಧಾರದಲ್ಲಿ ಆಸ್ತಿಯ ಖಾತೆಯು ಅಧಿಕೃತವಾಗಿ ಮಲ್ಲಮ್ಮ ಅವರ ಹೆಸರಿನಲ್ಲಿ ತೆರೆಯಲ್ಪಟ್ಟಿತ್ತು. ಮಲ್ಲಮ್ಮ ಅವರು ಜೀವಂತವಾಗಿರುವ ಸಂದರ್ಭದಲ್ಲೇ ತಮ್ಮ ಮೂವರು ಪುತ್ರರಾದ ಶಿವಶಂಕರ್, ಕಾಮಕ್ಷಯ್ಯ, ಮಂಜುನಾಥ ಇವರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇರುವಂತೆ ದಾಖಲೆಗಳಲ್ಲಿ ಸ್ಪಷ್ಟವಾಗಿ ಗುರುತಿಸಿದ್ದು ಗಮನಾರ್ಹ. ಶಿವಶಂಕರ್ ಅವರ ಮರಣದ ನಂತರ ವಂಶವೃಕ್ಷದಲ್ಲಿ ದುರುದ್ದೇಶಿತ ಬದಲಾವಣೆ ಆಗಿದೆ. ಮಲ್ಲಮ್ಮ ಅವರ ನಿಧನದ ನಂತರ ಕುಟುಂಬದಲ್ಲಿ ವಂಶವೃಕ್ಷ ತಯಾರಿಸುವ ಸಂದರ್ಭದಲ್ಲಿ ಗಂಭೀರ ತಿರುಚಾಟ ನಡೆದಿರುವುದು ಗೋಚಿರಿಸಿದೆ. ಹಿರಿಯ ಪುತ್ರ ಶಿವಶಂಕರ್ ಅವರಿಗೆ ಎರಡು ಪತ್ನಿಯರು ಇದ್ದು, ಹಿರಿಯ ಪತ್ನಿ: ವಿಮಲ, (ಮಗ ನಂದಕುಮಾರ್) ಎರಡನೇ ಪತ್ನಿ:ರಾಧಾ, (ಮಗಳು  ಮಾನಸ) ಆದರೂ, ವಂಶವೃಕ್ಷ ತಯಾರಿಸುವಾಗ ವಿಮಲ ಅವರ ಹೆಸರನ್ನು ಜಾಣ್ಮೆಯಿಂದ ಕೈಬಿಟ್ಟು, ಅಧಿಕಾರಿಗಳಿಗೆ ಅಸತ್ಯ ಮಾಹಿತಿ ನೀಡಲಾಗಿದೆ. ಈ ತಪ್ಪು ಮಾಹಿತಿಯ ಆಧಾರದ ಮೇಲೆ ಮುಂದಿನ ಪೀಳಿಗೆಯ ಹೆಸರಿನಲ್ಲಿ ಪೌತಿ ಖಾತೆ ಮಾಡಿಸಿಕೊಂಡು, ವಿಮಲರಿಗೆ ಯಾವುದೇ ಮಾಹಿತಿ ನೀಡದೇ ಆಸ್ತಿಯನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ದಾಖಲೆ ತಿರುಚುವುದು, ವಾರಸುದಾರರನ್ನು ಮರೆಮಾಡುವುದು, ತಪ್ಪು ಮಾಹಿತಿಯ ಆಧಾರದ ಮೇಲೆ ಖಾತೆ ಬದಲಾವಣೆ ಮಾಡಿಸುವುದು ಇವೆಲ್ಲವೂ ಕಾನೂನು ಬಾಹಿರ ಕೃತ್ಯಗಳಾಗಿವೆ. ಯಾವುದೇ ಪರಿಸ್ಥಿತಿಯಲ್ಲೂ ಆಸ್ತಿ ಕ್ರಯ ಪಡೆದವರಿಗೆ ಹೊಸ ಖಾತೆ ಮಾಡಬಾರದು. ಮೂಲ ದಾಖಲೆಗಳನ್ನು ಪುನಃ ಪರಿಶೀಲಿಸಿ ನಿಜಸ್ಥಿತಿ ಬಹಿರಂಗಪಡಿಸಬೇಕು. ತಪ್ಪು ಮಾಹಿತಿ ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಮಿತಿ ಸ್ಪಷ್ಟ ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವೆಂಕಟೇಶ್ ಬ್ಯಾಕರವಳ್ಳಿ, ಲಕ್ಷ್ಮೀ, ವಸಂತ್ ಕುಮಾರ್, ವಿಮಲಾ, ದ್ರಾಕ್ಷಾಹಿಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.